ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದ ಕ್ಷೇತ್ರವೊಂದರಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ತೆಲಂಗಾಣದಿಂದ ಪ್ರಧಾನಿ ಮೋದಿ ಅವರು ಸ್ಪರ್ಧಿಸುವಂತೆ ಅಲ್ಲಿನ ಬಿಜೆಪಿ ನಾಯಕರು ಮನವಿ ಸಲ್ಲಿಸಿದ್ದಾರೆ.
ತೆಲಂಗಾಣ ವಿಧಾನಸಭೆ ವಿಸರ್ಜನೆಯಾಗಿದ್ದು, ಅಸೆಂಬ್ಲಿ ಚುನಾವಣೆ ನಡೆಯಬೇಕಿದೆ. ಈ ಚುನಾವಣೆಗೆ ಪ್ರಧಾನಿ ಮೋದಿ ಅವರು ಸ್ಟಾರ್ ಪ್ರಚಾರಕರಾಗಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರು ಸಿಕಂದರಾಬಾದ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ.
ಬಿಜೆಪಿ ನಾಯಕ ಬಂಡಾರು ದತ್ತಾತ್ರೇಯ ಅವರ ನೇತೃತ್ವದ ಬಿಜೆಪಿ ಮುಖಂಡರು, ಈ ಕುರಿತಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್ ಅವರು ಕರ್ನೂಲಿನ ನಂದ್ಯಾಲ್ ಹಾಗೂ ಮಹಾರಾಷ್ಟ್ರದ ರಾಮ್ ಟೆಕ್ ನಿಂದ ಸ್ಪರ್ಧಿಸಿದ್ದರು. ಮೋದಿ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿ ಹಾಗೂ ವಡೋದರಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕೊನೆಗೆ ವಾರಣಾಸಿ ಕ್ಷೇತ್ರವನ್ನು ಉಳಿಸಿಕೊಂಡರು.
ಈಗ ದಕ್ಷಿಣ ಭಾರತದಲ್ಲಿ ಸ್ಪರ್ಧಿಸಲು ಮೋದಿ ಅವರು ಇಚ್ಛಿಸಿದ್ದಾರೆಯೇ? ಅದರಲ್ಲೂ ತೆಲಂಗಾಣದ ಸಿಕಂದರಾಬಾದ್ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆಯೇ? ಕಾದು ನೋಡಬೇಕಿದೆ.


Comments
Post a Comment